ಚಟಪಟಾ ಚಾಟ್ - ಮುಂಬೈ vs ದಿಲ್ಲಿ

 ಪಾಪಡಿ ಚಾಟ್ ಅಂತ ಬ್ಲಾಗ್ ಹೆಸರಿಟ್ಟು ಚಾಟ್ ಬಗ್ಗೆ ಬರಿಲಿಲ್ಲ ಅಂದ್ರ ಹೆಂಗ ನಡಿತದ ಹೇಳ್ರಿಲಾ! ಇವತ್ತ ನೋಡೋಣ ಬರ್ರಿ ದಿಲ್ಲಿ ಚಾಟ್ ನಾಗ ಏನೇನು ಮೆನು ಅದ. ಚಾಟ್ ಅಂದ್ರ ಸಾಕು ಬಾಯಾಗ ನೀರು ಬರ್ತಾವಲಾ...?

ಚಾಟ್ ಅಂದ ಕೂಡಲೇ ನಮಗೆಲ್ಲ ಅಗದಿ ಮೊದಲು  ನೆನಪು ಬರೋದು ಪಾನಿಪೂರಿ. ಭಾಳ ಟೆನ್ಶನ್ ಆದಾಗ, ಮನ್ಯಾಗ ತಿಂದು ಬ್ಯಾಸರ ಆದಾಗ, ಬಾಯಿ ಕೆಟ್ಟಾಗ ಇದಕೆಲ್ಲ ಪಾನಿಪೂರಿ ಪರಮ ಔಷಧಿ , ಬಾಯಿ ಒಳಗ ಪಟ್ ಅಂತ ಪೂರಿ ಒಡದು ಜೀರಿಗೆ ಘಮದಿಂದ  ಕೂಡಿದ  ಖಾರ, ಸಿಹಿ ಮಿಶ್ರಿತ ನೀರಿನ ಸುನಾಮಿ ರಸಗ್ರಂಥಿಗಳ ಮೂಲಕ ಮೆದಳನ್ನು ತಲುಪಿದಾಗ ಆಗೋ ಅನುಭವ ತಿಂದವನೇ ಬಲ್ಲ. 


ಇನ್ನ  ಬಾಕಿ ನಮ್ಮ ಕಡೆ ಸಿಗೋ ಇತರೆ ಚಾಟ್ ಗಳು ಅಂದ್ರ - ಶೇವ್ ಪೂರಿ , ಮಸಾಲಾ ಪೂರಿ, ಭೇಳ, ಪಾವ್ ಭಾಜಿ ದಾಬೇಲಿ ಇನ್ನೂ ಏನೇನೋ. ಆಮೇಲೆ ಕರಿದ ಸ್ಟ್ರೀಟ್ ಫುಡ್ ನಾಗ ಕಾಂದಾ ಭಜಿ , ಬಟಾಟ ಭಜಿ ,ವಡಾ ಪಾವ್ ಭಾಳ ಪ್ರಸಿದ್ಧ ಇರ್ತಾವ ನಮ್ಮಲ್ಲೆ. ಇವುಗಳ ಹೆಸರನ್ಯಾಗ ಬಟಾಟ, ಕಾಂದಾ ಇರೋದು ನೋಡಿದ್ರ  ಇವೆಲ್ಲ ಮುಂಬಯಿಯಿಂದ ಆಮದು ಆಗ್ಯಾವ ಅಂತ ಯಾರದ್ರೂ ಹೇಳಬಹುದು. ಅದಕ ಇವುಗಳ ಒಳಗ ಪಾವ್ ಅನ್ನೋದು ಒಂದು ಮುಖ್ಯ ಪಾತ್ರಧಾರಿ, ಶೇವ್ ಮತ್ತ ಉಳ್ಳಾಗಡ್ಡಿಗೆ ಪ್ರಮುಖ ಪೋಷಕ ಪಾತ್ರ.

ಇನ್ನ ನಡ್ರಿ ಮುಂಬಯಿ ದಾಟಿ ಮುಂದ ದಿಲ್ಲಿಗೆ ಹೋಗೋಣ. ಅಲ್ಲೇನೂ ಸಹ ಈ ಪಾನಿಪುರಿ ಅನ್ನೋದು  ಇದ್ದೆ ಅದ. ಆದ್ರ  ಅದರ  ಹೆಸರು ಮಾತ್ರ “ಗೊಲಗಪ್ಪಾ”. ಅಂದ್ರ ಗೋಲ್ ಗೋಲ್ ಇರ್ತದ ಬ್ಯಾಯಾಗ ಹಾಕ್ಕೊಂಡು ಗಪ್ಪ್  ಮಾಡಬೇಕು ಅಂತ ಅರ್ಥ. ಇದರಾಗ ಒಂದು ಮಜಾ ಟ್ವಿಸ್ಟ್ ಏನಂದರ ನಮ್ಮ ಕಡೆ ಪೂರಿ ಒಂದೇ ಥರದ್ದು ಸಿಕ್ರ ಇಲ್ಲೇ ಎರಡು ಪ್ರಕಾರದ್ದು ಇರತಾವ ; ಆಟಾ (ಗೋಧಿಹಿಟ್ಟು) ಮತ್ತ ಸೂಜಿ (ರವಾ). ಎರಡೂ ಆಕಾರ ಮತ್ತ ರುಚಿವಳಗ ಬೇರೆ ಬೇರೆ ಇರ್ತಾವ. ರವಾದ್ದು ಅಗದಿ ದುಂಡ ಇರಲ್ದೆ ಸ್ವಲ್ಪ ಅಂಡಾಕೃತಿ ಇರ್ತದ. 

ಇನ್ನ ದಿಲ್ಲಿ ಕಡೆ ಭಾಳ ಪ್ರಸಿದ್ಧವಾದ  ಚಾಟ್ ಅಂದ್ರ ಪಾಪಡಿ ಚಾಟ್, ದಹಿ ಭಲ್ಲೆ, ದಹಿ ಔರ್ ಸೋಂಟ್ ವಾಲೆ ಗೊಲಗಪ್ಪೆ, ಆಲೂ ಟಿಕ್ಕಿ, ಆಲೂ ಚಾಟ್, ಹಿಂಗ  ಲಿಸ್ಟ್  ಬೆಳಿತದ. ಕರಿದ ಸ್ಟ್ರೀಟ್ ಫುಡ್ ಅಂದ್ರ ಸಮೋಸಾ, ಬ್ರೆಡ್ ಪಕೋಡ, ಜೀಲೆಬಿ ಇವು ಹಿಟ್ ಲಿಸ್ಟ್ ನಲ್ಲಿ ಅವ. ಛೋಲೆ ಭಟುರೆಗೆ ತನ್ನದೇ ಆದ ಪ್ರಮುಖ ಸ್ಥಾನ ಅದ. ಇದು ನಾಷ್ಟ, ಊಟ ಮತ್ತ ಯಾರಿಗರೇ ಪಾರ್ಟಿ ಕೊಡೋದು ಹಿಂಗ ಎಲ್ಲ ಕಡೆನೂ ಸಲ್ಲತದ.

ಚಾಟ್ ಅಂದ್ರ ಬರಿ ಹುಳಿ ಮತ್ತ ಖಾರ ಅನ್ಕೊಬ್ಯಾಡ್ರಿ. “ದೌಲತ್ ಕಿ ಚಾಟ್” ಅನ್ನೋದು ಹಳೆಯ ದಿಲ್ಲಿಯಲ್ಲಿ ಸಿಗೋ  ಒಂದು ಸಿಹಿ ಪದಾರ್ಥ. ಹಸಿ ಹಾಲನ್ನು ರಾತ್ರಿಯಿಡಿ ಮಂಜುಗಡ್ಡೆ ಮೇಲೆ ಇಟ್ಟು ತಣ್ಣಗಾಗಿಸಿ , ಕೇಸರಿ  ಮತ್ತು ಒಣ ಹಣ್ಣು ಸೇರಿಸಿ ಮಾಡಿದ  ದೌಲತ್ ಕಿ ಚಾಟ್ ಕೇವಲ ಚಳಿಗಾಲದಲ್ಲಿ ಮಾತ್ರ ಸಿಗತದ.

ನೀವು ಮುಂದಿನ ಸಾರಿ ದಿಲ್ಲಿಗೆ ಹೋದ್ರ ಚಾಂದನಿ ಚೌಕ್ , ಕಮಲಾ  ನಗರ್ , ಕರೋಲ್ ಬಾಗನಾಗ  ಇವನ್ನೆಲ್ಲ ಮನಸ್ಪೂರ್ತಿಯಾಗಿ ಸವಿಬಹುದು.   ಹೆಂಗಿತ್ತು ನಿಮ್ಮ ಅನುಭವ ಅಂತ ಹೇಳೋದು ಮಾತ್ರ ಮರಿಬ್ಯಾಡ್ರಿ ಮತ್ತ .

ಹೀಗೊಂದು ಮೆಟ್ರೋ ಪ್ರಹಸನ

 ಈ ಬ್ಯಾಸಗಿ ಬಿಸಿಲಿನ ಝಳಕ್ಕ ಹೊರಗ ಬೀಳಬೇಕು ಅನ್ನಿಸೋದಿಲ್ಲ , ಅಷ್ಟಪರಿ ಸೂರ್ಯ ಹೊತ್ತಿ ಉರಿತಿರತಾನ. ಎಲ್ಲ ಮಹಾನಗರಗಳೊಳಗ ಈ ಮೆಟ್ರೋರೈಲು ಆಗಿ ತಣ್ಣಗ ಎಸಿನಾಗ ಹೋಗೊ ಹಂಗ ಆಗೆದ. ಇದು ಅಲ್ಲದ ಸ್ವಲ್ಪ ಇದರಿಂದ ಪರಿಸರ ಮಾಲಿನ್ಯನೂ ಕಡಿಮೆ ಆಗೇದ. 

2002ರೊಳಗ ಸುರು ಆದ ದಿಲ್ಲಿ ಮೆಟ್ರೋ ದೇಶದ ಎರಡನೇ ಮೆಟ್ರೋ ಸೇವೆ (ಮೊದಲು ಸುರು ಆಗಿದ್ದು ಕೋಲ್ಕತ್ತಾ).  ಭರ್ತಿ 9 ಲೈನಗಳು ಇರೋ ಇದು ದಿಲ್ಲಿಯ ಜೀವನಾಡಿಯಾಗೆದ. ಇದರ ವಿಶೇಷತೆ ಏನಂದರ ಇದು ಬೇರೆ ನಗರಗಳನ್ನ ಅಷ್ಟ ಅಲ್ಲ ರಾಜ್ಯಗಳನ್ನೂ ಸೇರಸ್ತದ, ಉದಾಹರಣೆಗೆ ಉತ್ತರ ಪ್ರದೇಶದ ನೊಯಿಡಾ, ಗಾಜಿಯಾಬಾದ್, ಹರಿಯಾಣಾದ ಗುರುಗ್ರಾಮ , ಫರಿದಾಬಾದ್. 

ಆಮೇಲೆ ನೀವ ಎಂದಾದರೂ ಈ ಮೆಟ್ರೋದಾಗ ಪ್ರಯಾಣ ಮಾಡೋದಾದ್ರ ಅಗದಿ ಟೈಮಿಗೆ ಸರಿಯಾಗಿ ಸ್ಟೇಷನಕ್ಕ ಹೋಗಬೇಕ ಮತ್ತ , ಯಾಕಂದ್ರ ದೆಹಲಿ ಮೆಟ್ರೋ ನಿಖರವಾದ ಸಮಯಕ್ಕ ಬರತದ. ವಾಸ್ತವವಾಗಿ 99.7% ಸಮಯಕ್ಕೆ ಸರಿಯಾಗಿ ಚಲಿಸೋ ಸಾರಿಗೆ ವ್ಯವಸ್ಥೆ ಇದಾಗೆದ. ನಮ್ಮಲ್ಲೆ ಇಷ್ಟಪರಿ ಟೈಮಿಗೆ ಸರಿ ಇರೋದು ಒಂದು ಆಶ್ಚರ್ಯ ಅಲ್ಲದ ಇನ್ನೇನು? 

ಸುಖಕರ ಪ್ರಯಾಣ ಒಂದೇ ಅಲ್ಲ ಇದರಾಗ ಹೋಗೋ ಮುಂದ ನಿಮಗ ಮಜಾ ಮಜಾ ಮಂದಿ ನೋಡಲಿಕ್ಕೆ ಸಿಗತಾರ. ತಲಿ ತಗ್ಗಿಸಿ ಮೊಬೈಲ್ ತಿಕ್ಕವರು ಅಂತೂ ಎಲ್ಲಾ ಕಡೆ ಇಧಾಂಗ ಇಲ್ಲೇನೂ ಇರತಾರ! ಅವರನ್ನ ಬಿಡ್ರಿ!! ಅದಲ್ಲದ ಬಾಜುದವರ ಫೋನದಾಗ ಹಣಿಕಿ ಹಾಕೋ ಮಹಾಪುರುಷರು ಇರತಾರ, ಮಹಿಳೆ ಅಥವಾ ವೃಧ್ಧರ ಸೀಟನಾಗ ಕೂತು ನಕಲಿ ನಿದ್ದಿ ಮಾಡವರು (ಯಾರು ಎಬ್ಬಿಸಬಾರದಲಾ ), ದಾರಿ ಒಳಗ ಮೇಕ್ಅಪ್ ಮಾಡಕೊಳ್ಳವರು, ಸೇಲ್ಫಿ ತಕ್ಕೊಳವರು, ಇನ್ನ ಕೊನೆ ಕಂಪಾರ್ಟ್ಮೆಂಟ್ ನಾಗ ಕೆಲ ವಿದ್ಯಾರ್ಥಿಗಳು, ಯುವಕರು ಶಿಸ್ತಾಗಿ ಕೆಳಗ ಕೂತು ತಮ್ಮ ಪ್ರಾಜೆಕ್ಟು ಅಸೈನ್ಮೆಂಟು ಮಾಡ್ಕೊತ ಮಗ್ನ ಆಗಿ ಬಿಟ್ಟಿರತಾರ. ಈ ನೆಲದ ಸೀಟ್ ಮ್ಯಾಲೆ, ಎಲ್ಲೂ ಕೂಡಲಿಕ್ಕೆ ಜಾಗ ಸಿಗದ ದಣಿದ ಜೀವಿಗಳೂ ಇರತಾರ

ಇನ್ನೊಂದೆರಡು ಕಾರಣಕ್ಕ ನನಗ ಈ ಮೆಟ್ರೋ ಪ್ರೀಯ ಆಗೆದ ಅಂದ್ರ ಇದರ ಲೈನ್ ಗುಂಟ ಮಳೆ ನೀರು ಕೊಯ್ಲು ವ್ಯವಸ್ಥಾ ಅದ. ಅಂದ್ರ ಲೈನ್ ಮ್ಯಾಲೆ ಬಿದ್ದ ಒಂದ ಮಳಿಹನಿನೂ ವ್ಯರ್ಥ ಆಗಂಗಿಲ್ಲ. ಇನ್ನೊಂದು ಅಂದ್ರ ಇದರ ಎಸ್ಕಲೇಟರನಾಗ "ಸಾರಿ ಗಾರ್ಡ್" ಅವ. ಅಂದ್ರ ನೀವು ಮೆಟ್ರೋದಾಗ ಪ್ರಯಾಣಿಸೋ ಮುಂದನೂ ಮಸ್ತ ರೇಶ್ಮಿ ಸೀರಿ ಉಟಗೊಂಡ ಹೋದ್ರ ನಡೀತದ ಅಂತಾತು. 

ಇನ್ನೊಂದು ಕೊನೆ ಗುಟುಕು: ಮುಂದಿನ ಸಲ ನೀವು ದಿಲ್ಲಿ ಮೆಟ್ರೋನಾಗ ಹೋದ್ರ ಅಲ್ಲಿ ಕೇಳಿ ಬರೋ ಧ್ವನಿಗಳು ಇರ್ತವಲಾ ಅವನ್ನ ಲಕ್ಷಕೊಟ್ಟ ಆಲಸರಿ. ಮತ್ತ ನೀವು ಹಿಂದಕ ದೂರದರ್ಶನ ನೋಡಿದವರು ಆಗಿದ್ರ ನಿಮಗ ಈ ಧ್ವನಿಗಳು ಪರಿಚಿತ ಅನಸ್ತಾವ. ಅವು ಯಾರವು ಅಂದ್ರ ; ಹಿಂದಿಯಲ್ಲಿ ಧ್ವನಿ ನೀಡಿದವರು "ಶಮ್ಮಿ ನಾರಂಗ" ಮತ್ತ ಇಂಗ್ಲಿಷ್ ಧ್ವನಿಯ ಒಡತಿ "ರೀನಿ ಖನ್ನಾ" . ಇವರಿಬ್ಬರೂ ಕ್ರಮವಾಗಿ ಹಿಂದಿ ಮತ್ತ ಇಂಗ್ಲಿಷ್ ಸಮಾಚಾರ ಓದತಿದ್ರು, ನೆನಪಾಗಿಲ್ಲ ಅಂದ್ರ ಈ ಫೋಟೋ ನೋಡ್ರಿ.



ಇಟ್ಲಿ, ಬಡಾ ಸಾಬರ!!??


   ಎಲ್ಲರದೂ ಮುಂಜಾನೆ ಫರಾಳ ಆತೇನು? ಏನ್ ತಿಂದ್ರಿ ಅವಲಕ್ಕಿ, ಉಪ್ಪಿಟ್ಟು, ದ್ವಾಶಿ  ಅಥವಾ ಇಟ್ಲಿ, ಬಡಾ ಸಾಬರ!!??

   ಇಟ್ಲಿ, ಬಡಾ ಸಾಬರ ಇವೇನೂ  ಹೊಸ ಪದಾರ್ಥ ಅನ್ಕೊಂಡ್ರಿ?? ಇವೆಲ್ಲ  ಇಡ್ಲಿ  ವಡಾ ಮತ್ತ ಸಾಂಬಾರ ಇದರ ಅಪಭ್ರಂಶ ರೂಪ. ನಾರ್ತ್ ಇಂಡಿಯಾದಾಗ  ಕೆಲವೊಬ್ಬರು  ಹಿಂಗ  ಉಚ್ಚಾರ  ಮಾಡ್ತಾರ, ( ಎಲ್ಲರೂ ಅಲ್ಲ ಮತ್ತ ) ಅಷ್ಟ  ಅಲ್ಲ ಅಂಗಡಿ ಹೊರಗ  ಬೋರ್ಡ್ ಮ್ಯಾಲೇನೂ ಬರದಿದ್ದ ನೋಡೆನಿ, ಅವರನ್ನ ಹಿಂಗಲ್ಲ ಹಿಂಗ ಅಂತ ತಿದ್ದಿನೂ ಬಂದೇನಿ. ನಿಮ್ಮಲೆನೂ  ಕೆಲವೊಬ್ಬರಿಗೆ  ಉತ್ತರ  ಭಾರತದಾಗ   ಅನುಭವ  ಆಗಿರಲಿಕ್ಕೆ  ಸಾಕು.
    ಈ ಕಡೆ ಮಂದಿ ನಮ್ಮ ದ್ವಾಶಿ ಇಡ್ಲಿ ಅಂದ್ರ ಮೂಗ ಕೊಯ್ಯಕೊತಾರ ನೋಡ್ರಿ. ನಮ್ಮ ಕಡೆ ನಾರ್ತ್ ಇಂಡಿಯನ್ ಊಟಕ್ಕ ಕ್ರೇಜ್ ಅದಲಾ ಹಂಗೆ.ಯಾವಾದರೆ ಸೌತ್ ಇಂಡಿಯನ್ ರೆಸ್ಟೋರೆಂಟ್ ಇರಲಿ ಅಥವಾ ನಮ್ಮ ದೆಹಲಿ ಕರ್ನಾಟಕ ಸಂಘದ ಫುಡ್  ಸೆಂಟರ್  ಇರಲಿ ಜನರಿಂದ ತುಂಬಿ ತುಳಕತಿರ್ತಾವ.
ದೆಹಲಿ ಕನಾಟಕ ಸಂಘದ ಫುಡ್ ಸೆಂಟರ್ನಾಗಿಂದು ವಡಾ , ಚಿತ್ರ ಕೃಪೆ : ಇಂಟರ್ನೆಟ್ 
    ಇವರ ಇನ್ನೂ ಒಂದ ದೊಡ್ಡ ವೀಕ್ ನೆಸ್  ಅಂದ್ರ ಸಾಂಬಾರ್ ನೋಡ್ರಿ. ಅದನ್ನ ಮತ್ತ ಮತ್ತ ಹಾಕಿಸಿಗೊಂಡು ಸವಿತಾರ. ಒಂದ ಮಸಾಲಾ ದೋಸಾ ತಿನ್ನೋದ್ರಾಗ ಅಂದ್ರ ಸರಾಸರಿ ಬಟ್ಟಲ ಸಾಂಬಾರ ಸ್ವಾಹಾ ಆಗಿರತದ.
    ಯಾರಾದರೂ  ನಮ್ಮ ಕಡೆಯವರು  ಮನಿ ಬಾಜೂಕ  ಇರಲಿಕ್ಕೆ ಬಂದರ ಅಂದ್ರ ಸಾಕು " ಭಾಭಿಜಿ, ಇಡ್ಲಿ ದೋಸಾ ಕಬ್ ಖಿಲಾವೊಗೆ?" ಅಂತಾನೋ   ಅಥವಾ " ಹಮೇ  ಭೀ   ಸಿಖಾವೊ" ಅಂತ ಆತ್ಮೀಯತೆ  ಇಂದ  ಕೇಳ್ತಾರೆ.  
    ಮಾಡಲಿಕ್ಕೆ ಕಲಿಬೇಕು ಅಂದ್ರ ಎಲ್ಲಿಂದ ಶುರು ಆಗ್ತದ ಅಂದ್ರಿ?  ಇಡ್ಲಿ ಕುಕ್ಕರ್, ದೋಸಾ ಹಂಚು ಖರೀದಿ ಇಂದ ಸುರು ಆಗಿದ್ದು   ಕೊಬ್ಬರಿ ಚಟ್ನಿ ಮಾಡೋ ತನಕ ಅಂದ್ರ  ಒಂದ ಸಣ್ಣ ಕೋರ್ಸ್  ಆಗ್ತದ.
      " ಕಲ್ ಬನಾವುಂಗಿ, ಬಾಬುಕೋ ಟಿಫನ್ ಮೆಂ ಭೀ ದುಂಗಿ " ಅಂತ ತಮ್ಮ ಮನಿ ಮಂದಿಗೆ ಮಾಡಿ ಹಾಕಿ ನಮಗೊಂದು ವಾಟ್ಸಾಪ್ ನಾಗ ಫೋಟೋ ಹಾಕಿ ತಮ್ಮ ಖುಶಿ ಹಂಚಿಗೊತಾರ. 
  



ದಿಲ್ಲಿ ಕಿ ಸರ್ದಿ


     ನಮ್ಮ  ಕರ್ನಾಟಕದ ಹವಾಮಾನ ನೋಡ್ರಿ ಅಗದಿ ಮಸ್ತ್ ಇರತದ ಜಾಸ್ತಿ ಚಳಿ ಇಲ್ಲ ಜಾಸ್ತಿ ಸೆಕೆ ಇಲ್ಲಆದ್ರ ದಿಲ್ಲಿನಾಗ ಎರಡೂ ಅತಿರೇಕ ಅಂತ ನಿಮಗ ಗೊತ್ತ ಇದ್ದಿದ್ದ ಅದ.ನಾ ಮೊದಲನೇ ಸಾರಿ ಇಲ್ಲೇ ಬಂದಿದ್ದು ಬ್ಯಾಸಗಿನಾಗ. ಇಲ್ಲಿ ರಣ ರಣ ಬಿಸಿಲು ನೋಡಿ ಊರಾಗ ಚಳಿ ಇರತದ ಅಂತ ಕಲ್ಪನಾ ಮಾಡಲಿಕ್ಕೂ  ಆಗವಲ್ಲತ  ಆಗಿತ್ತು.
     ಅಕ್ಟೋಬರ್  ತಿಂಗಳು ಮೊದಲನೇ ವಾರ  ಇರಬೇಕು ನನಗ ಆಜು ಬಾಜೂದವರು ಸಲಹಾ ಕೊಡಲಿಕತ್ತರು. ಚಳಿ ಶುರು ಆಗತದ ರಜಾಇ ಸ್ವೆಟರ್ ಎಲ್ಲ ಖರೀದಿ ಮಾಡಿ ಇಟ್ಟಕೊ ಅಂತ. ಆತ ಬಿಡ ಅನ್ಕೊಂಡು ನಾನೂ ರಜಾಇ  ತೊಗೋಳಿಕ್ಕೆ  ಹೋದೆ. ಇದಕ್ಕೂ ಮೊದಲು ನಾವೆಲ್ಲ ಜಾಸ್ತಿ ನೋಡಿದ್ದು ಲೈಟ್ ವೇಟ್ ರಜಾಇ, ಇಲ್ಲೇ ನೋಡಿದ್ರ ಒಳ್ಳೆ ಹಾಸಗೋಳ್ಳೋ  ಗಾದಿ ಇರತದಲ್ಲಾ ಅದರ  "ತಮ್ಮ" ಇದ್ದ ಹಂಗ ದಪ್ಪ ಇದ್ದವು. ಇದನ್ನ ಹೋತಗೊ ಬೇಕಾ ಅಷ್ಟು ಥಂಡಿ ಇರತದಾ? ಸಂಶಯ ನನಗ ಇನ್ನೂ ಬಿಟ್ಟಿದ್ದಿಲ್ಲ.
     ಆದ್ರ ಸಂಶಯ ಭಾಳ ದಿವಸ ಏನ್ ಉಳಿಲಿಲ್ಲ ಮತ್ತ!!!!  ನವಂಬರ್ ಇಂದ   ಸುರು ಆತ ನೋಡ್ರಿ ಥಂಡಿ, ಮೊದಲ  ಒಂದ  ಚಾದರ, ಆಮೇಲೆ  ಎರಡು  ಆಮೇಲೆ  ರಗ್ಗು . ಇನ್ನ  ಅದೂ ಸಾಲವಲ್ಲತ ಆತು ಅವಾಗ "ಗಾದಿ ತಮ್ಮ" ಅನ್ನೋ ರಜಾಇ ಹೊರಗ ತಗಿಬೇಕಾತು!!!
ಬಣ್ಣ ಬಣ್ಣದ ಉಣ್ಣೆಯ ಉಡುಪುಗಳು 
     ಆದ್ರ ಏನ ಅನ್ನರಿ ಥಂಡಿದೂ ಒಂದ ಮಜಾನೇ ಬೇರೆ. ಮುಂಜಾನೆ ಒಂಬತ್ತ ಹೊಡದ್ರೂ ಮುಂದಿನ  ದಾರಿ  ಕಾಣಲಾರದಂಗ  ಇರೋ ಮುಸುಕಿದ ಮಂಜು,  ಹಿಂತಾ  ಮಂಜನಾಗೂ  ಕಣ್ಣ  ಮೂಗ  ಎರಡು  ಬಿಟ್ಟ  ಎಲ್ಲ ಕವರ್  ಮಾಡ್ಕೊಂಡ್  ಸಾಲಿಗೆ ಹೋಗೋ ಸಣ್ಣ ಹುಡುಗೋರು.  ಹತ್ತ ಗಂಟೆಕ್ಕ ಎಳೆ ಬಿಸಲು,  ಬಿಸಲ ಕಾಯಿಸಗೋತ   ಕೂತ ಅಜ್ಜಿಗೊಳು,  ನಾ ಅಂತೂ  ಬಿಸಿ  ಬಿಸಿ  ಶುಂಠಿ  ಚಹಾ  ಕುಡಕೋತ ಬಾಲ್ಕನಿನಾಗ  ಎಲ್ಲ ಮುಂಜಾನೆ ದೃಶ್ಯಗಳನ್ನ   ಆನಂದಿಸುತಿದ್ದೆ .
    ಈ ಅಜ್ಜಿಗೋಳದು  ಮನಿ  ಮಂದಿಗೆಲ್ಲ  ಬಣ್ಣ  ಬಣ್ಣದ  ಸ್ವೇಟರ್ ಹೆಣೆಯೋ ಸಂಭ್ರಮ ನೋಡಬೇಕ್ರಿ. ಎಳೆ ಬಿಸಿಲಾಗ   ಸ್ವೇಟರ್  ಹೆಣಕೋತ " ನಮ್ಮ ಕಾಲದಾಗ  ಎಷ್ಟರೇ ಥಂಡಿ ಇರತಿತ್ತು, ಈಗ ಎಲ್ಲ ಕಡಮಿ ಆಗಿ ಬಿಟ್ಟದ" ಅಂತ ಹಳೆ ಪ್ರಸಂಗ ನೆನಪ ಮಾಡಕೋತ ನಡುವ ನಡುವ ಶೇಂಗಾ ಬೆಲ್ಲ ಅಥವಾ ಎಲ್ಲ ಚಿಕ್ಕಿ ಸವಿತಿರತಾರ.
      ಈ ಚಳಿಗಾಲಕ್ಕ ದಿನಚರಿನೂ ಹೊತಗೊಂಡ ಮಲಗಿ ಬಿಡತದ  ಏನೋ ? 11:30 ತನಕ  ಬೆಳಗ  ಆದಂಗ  ಅನಸುದಿಲ್ಲ . ಎಲ್ಲ ಸ್ವಲ್ಪ  ಸಾವಕಾಶನೇ  ನಡೀತದ.
ತರಾವರಿ ಚಿಕ್ಕಿಗಳು,  ಇವುಗಳಿಗೆ "ಗಜಕ್ " ಅಂತಾರ 
      
 ಹೊತ್ತು  ಮುಳಗೋದು  ಮಾತ್ರ  ಅಗದಿ ಲಗೂ. ಒಮ್ಮೆ  ಸಂಜಿ  ಆತು  ಅಂದ್ರ  ಮಾತ್ರ  ಅದ ಕಟ- ಕಟ  ಕುಟು -ಕುಟು  ಚಳಿ. ಅಂಗಡಿ  ಮುಗ್ಗಟ್ಟು  ಬೇಗನೆ  ಬಂದ ಆಗತಾವ. ಹೊರಗ  ಹೋದವರು  ಹಕ್ಕಿ ಗೂಡ ಸೇರೋ ಹಂಗ ಮನಿ ಒಳಗ ಬೆಚ್ಚಗ ಸೇರಕೊಂಡ ಬಿಡತಾರ. ಎಲ್ಲರ ಮನ್ಯಾಗಿಂದ ಪರಾಠಾದ್ದು  ಘಮ  ಬರಲಿಕ್ಕೆ  ಸುರು ಆಗತದ.   





ಶಂಕರಪಾಳಿ ಬೆನ್ನ ಹತ್ತಿ……


           ದೀಪಾವಳಿ ಮುಗಿತಾ ಎಲ್ಲಾರದೂ? eco friendly, ethnic ಮತ್ತ hashtag ಅಂತ ಎಲ್ಲಾ ದೀಪಾವಳಿನಾಗೂ ಪ್ರಕಾರ ಬಂದಾವ. ಅದ್ರಾಗಿಂದ ಒಂದ ಆಚರಿಸಿದ್ರಿ. ಚಕ್ಕಲಿ, ಉಂಡಿ ಮತ್ತ ಶಂಕರಪಾಳಿ ತಿಂದ್ರಿ ಇಲ್ಲೋ? ಈ ಶಂಕರಪಾಳಿ ನೋಡಿದಾಗ ಒಮ್ಮೆ ಒಂದ ಸಂಶಯ ಬರತದ. ಪಾಪ ಆ ಭೋಲೆ ಶಂಕರಗೂ, ಈ ಶಂಕರಪಾಳಿಗೂ ಏನ ಸಂಬಂಧ ಅಂತ. ಅದೇನೊ ಗೋಕಲಾಷ್ಟಮಿಗೂ……….. ಅಂತಾರಲ್ಲ ಹಂಗ.
ತಿರಗಿಸಿ  ಮುರಗಿಸಿ  ನೋಡಿದ್ರೂ
ಇದೇನ ತ್ರಿಶೂಲ ಇದ್ದಂಗರ ಇರಂಗಿಲ್ಲ, ಮತ್ಯಾಕ ಅಂತ ತಲಿ ಕೆಡಸಗೊಂಡಿದ್ದೆ..

           ಇಷ್ಟಕ್ಕ ಅಲ್ಲ ನಮ್ಮ ಬಾಜೂದವರು, ಅಂದ್ರ ಮಹಾರಾಷ್ಟ್ರದವರೂ ಸಹ ಶಂಕರಪಾಳಿನೇ ಅಂತಾರ. ಈ ಶಬ್ದ ವಡದ ಸಂಧಿ ಸಮಾಸನೂ ಹಚ್ಚಿ ನೋಡಿದೂ ನನಗ ಅರ್ಥ ಹೊಳಿಲಿಲ್ಲಾ. ಹಂಗ ಅಂತ ನನಗೂ ಕನ್ನಡ ವ್ಯಾಕರಣ ಭಾಳ ಏನ ಗೊತ್ತಿಲ್ಲ ಮತ್ತ.

            ಆದ್ರ ನಮ್ಮ ಕರ್ನಾಟಕ ಬಿಟ್ಟು ದಿಲ್ಲಿಗೆ ಬಂದ ಮ್ಯಾಲೆ ಈ ಸಂಶಯ ಪರಿಹಾರ ಆತು ನೋಡ್ರಿ. ಒಮ್ಮೆ ಖಾರಾ ಮತ್ತ ಶೇವ ತರಲಿಕ್ಕೆ  ಅಂಗಡಿಗೆ  ಹೋಗಿದ್ದೆ. ಒಬ್ಬಾಕಿ “ ಎಕ್ ಎಕ್ ಪಾವ್ ನಮಕಪಾರೆ ಔರ್ ಶಕ್ಕರಪಾರೆ ದೇನಾ” ಅಂದ್ರ, ಅಂಗಡಿಯವ ಉಪ್ಪುಖಾರ ಮತ್ತ ಸಿಹಿ ಶಂಕರಪಾಳಿ ಕೊಟ್ಟ. ಆವಾಗ ನೋಡ್ರಿ ಬುದ್ಧಗ ಜ್ಞಾನೋದಯ ಆದಂಗ ತಲ್ಯಾಗ ಲೈಟ ಹತ್ತಿತು.

            ಹಿಂದಿನಾಗ ಸಿಹಿದು ಶಕ್ಕರ+ಪಾರೆ ಮತ್ತ ಉಪ್ಪಿಂದು ನಮಕ+ಪಾರೆ ಅಂತಾರ ಅಂತ ಅವತ್ತ ಗೊತ್ತ ಆತ. ನಾವ ಈ ಎರಡಕ್ಕೂ, ಅಪಭ್ರಂಶಮಾಡಿ ಶಂಕರಪಾಳಿನೇ ಅತಿಂವಿ.

            ಒಟ್ಟ ಶಕ್ಕರ ಪಾರೆನ ಉತ್ತರದಿಂದ ದಕ್ಷಿಣಕ್ಕ ಬರೊಮುಂದ ಶಂಕರಪಾಳಿ ಆಗೆದ. ಅದು ಎಲ್ಲೆ ಆತು ಹೆಂಗ ಆತು ಅದನ್ನ ನಾ ಇನ್ನ ಹುಡಕಿಲ್ಲ.

ಈ ಏಳು ಜನುಮಗಳ ಅನುಬಂಧ(ನ)


     ನೀವೆಲ್ಲಾ ಹಿಂದಿ ಸಿನೇಮಾದಾಗ ಮತ್ತ ಧಾರಾವಾಹಿನಾಗ ಈ ಕರವಾಚೌತ್ ನೋಡಿರತಿರಿ; ಜರಡಿನಾಗ ಚಂದಪ್ಪನ್ನ ನೋಡಿ, ಆಮೆಲೆ ಗಂಡನ್ನ ಮಾರಿ ನೋಡಿ ಉಪವಾಸ ಮುರಿಯೊದು.

     ಆದ್ರ ಖರೆ ಇದರ ಗದ್ದಲಾ ಎಂಟಹತ್ತ ದಿನಾ ಮೊದಲ ಸುರು ಆಗತದ. ಮೊದಲನೇ ಲಕ್ಷಣ ಸೀರಿ ಅಂಗಡ್ಯಾಗ ಕಾಣಸ್ತದ. ಅವು ಝಗಾ ಝಗಾ ಅನ್ನೊ ಸೀರಿ, ಯಾವದ ತೋಗೊಳ್ಳಿ ಅಂತ confuse ಆಗೋ ನಾರಿ; ಇನ್ನ ಎಷ್ಟ ರೊಕ್ಕ ಬಿಚ್ಚಬೇಕೋ ಅಂತ ಒಣಗಿರೋ ಗಂಡಂದ್ರ ಮಾರಿ, ಇದರಿಂದ ತುಂಬಿ ತುಳಕತಾವ.

     ಹಿಂತಾ ಟೈಮ್‍ನಾಗ ಟೇಲರ್ ಅಂತೂ ದೇವರ ಎರಡನೇ ರೂಪ ನೋಡ್ರಿ. “ಭೈಯ್ಯಾ! ಮೇರಾ ಜಲ್ದಿ ಬನಾ ದೇನಾ, ಪರ್ ಅಚ್ಛೆಸೇ ಬನಾನಾ!!…”  ಅಂತ ಬೇಡಕೊಳೊದು ನೋಡಬೇಕು. ಆಮೆಲೆ ಮುಂದಿನ ಕೆಲಸ beauty parlor ನವರದು. ಅವರ ಅಂತೂ ಶಿಫ್ಟನಾಗ ಕೆಲಸಾ ಮಾಡತಾರ.

      ಹಬ್ಬ ಇನ್ನ ಎರಡ ದಿನಾ ಅಂದ್ರ ಮೆಹಂದಿ ಸಂಭ್ರಮ.  ರಸ್ತೆ, ಫುಟಪಾತ್ ಅನ್ನಲ್ಲದೆ ಎಲ್ಲಾ ಕಡೆ ಮೆಹಂದಿ ಹಚ್ಚೊರು, ಹಚಗೊಳೊರು ಇವರೇ ಕಾಣತಾರ. ಕರವಾಚೌತದ ಹಿಂದಿನ ದಿನಾ ಅಂತೂ ರಾತ್ರಿ ಒಂದು ಘಂಟೆ ತನಕ ರಸ್ತೆ ಮ್ಯಾಲೆ ಮೆಹಂದಿ ಗದ್ದಲ. ರೇಟೂ ಹಂಗ ಏರಕೊತ ಹೋಗತದ.


     ಹಬ್ಬದ ದಿನಾ ಇಷ್ಟ ದಿನಾ ಮಾಡಿದ್ದ ತಯಾರಿಗೆ, shopping ಗೆ ಸಾರ್ಥಕ ರೂಪ ಬರತದ. ಇಡಿ ದಿನಾ ನೀರೂ ಕುಡಿಲಾರದೆ ಇದ್ದರೂ  ಈ ಹೆಣ್ಣಮಕ್ಕಳ ಮಾರಿ ಮ್ಯಾಲೆ ನಗಿ ಮಾಸಂಗಿಲ್ಲಾ, ಸುಸ್ತ ಕಾಣಂಗಿಲ್ಲಾ. ಖರೇನ ಮೆಚ್ಚಬೇಕ ಮತ್ತ.


ಇನ್ನ ಕೆಲಸಕ್ಕ ಹೋದ ಗಂಡಸರು 3:30 ಇಂದನ ಟೈಂ ನೋಡಲಿಕ್ಕೆ ಸುರು ಮಾಡಿ ಬಿಟ್ಟಿರತಾರ, ಲಗೂ ಮನಿಗೆ ಹೋಗಬೇಕಲಾ ಮತ್ತ. ಇವತ್ತಿನ ದಿನಾ ತಡ ಆದ್ರ ಅವರ ಗತಿ ಏನ ಆಗತದ ನಾ ನಿಮ್ಮ imagination ಗೆ ಬಿಡತಿನಿ. ಆ ಕಡೆ Boss ಹೋದಾ ಅಂದ್ರ (ಅಂವಾನೂ ಓಡೊದ್ರಾಗ ಇರತಾನ) ಈ ಕಡೆ “ ಆ ರಹಾ ಹೂಂ ಜಾನೂ” ಅಂತ ಬ್ಯಾಗ ಏರಿಸೋದೆ.

ಇದರ ಮುಂದಿಂದು ನೀವ ಸೀನಮಾದಾಗ ನೋಡಿರತಿರಿ

ಉತ್ತರ ಭಾರತದಾಗ “ನಮ್ಮ ಮಂದಿ”

           
       ಇಲ್ಲೆ ನಮ್ಮ ಕನ್ನಡ ಮಂದಿ ಬೇಕಾದಷ್ಟು ಇದ್ದಾರ. ಕೆಲವೊಬ್ಬರು ನೌಕರಿ ಸಲುವಾಗಿ ಬಂದು ಇಲ್ಲಿ ಕಾಯಂ ನಿವಾಸಿಗಳಾಗಿ ಹೋಗ್ಯಾರ. ದಿಲ್ಲಿ ಒಳಗ ಚಂದಾಗಿ ಒಂದ ಕರ್ನಾಟಕ ಸಂಘ ಅದ. ಅಷ್ಟ ಅಲ್ಲದ ಬೇಕಾದಷ್ಟು ಕನ್ನಡ ಸಂಘ ಅವ, ರಾಯರ ಮಠ ಅದ. ಕನ್ನಡದವರು ನಡಸೋ ಸಾಲಿನೂ ಅವ. ಅದರ ಬಗ್ಗೆ ಇನ್ನೊಮ್ಮೆ ಹೇಳ್ತಿನಿ.


            ಹೊರಗ ಬಿದ್ದರ ಅಂಗಡ್ಯಾಗ, ಮಾಲ್‍ನಾಗ ಹಿಂಗ ಕನ್ನಡದವರು ಎಲ್ಲಾ ಕಡೆ ಸಿಗತಾರ. ನಾವ ಕನ್ನಡದಾಗ ಮಾತಾಡೋ ಮುಂದ ಹೊಳ್ಳಿ ಹೊಳ್ಳಿ ನೋಡಿದ್ರ ತಿಳಕೊಂಡ ಬಿಡೊದು ನಮ್ಮ ಮಂದಿ ಅಂತ.
 “ಕನ್ನಡದವರಾ?, ಎಲ್ಲಿಯವರು?” ಅಂತ ಕೇಳಿದ್ರ ಮೊದಲ “ಬ್ಯಾಂಗ್‍ಲೋರ್!!"  ಅಂತಾರ.  ನಾ ಅಂತೂ “ನಾ ಧಾರವಾಡದಕಿ” ಅಂತೆನಿ.
ಆಮೇಲೆ ನೋಡ್ರಿ “ಅಯ್ಯ ನಮ್ಮದು ಬಾಗಲಕೋಟಿರೀ!”, “ಅರೇ ನಮ್ಮದು ಅಲ್ಲೆ ಹಾವೇರಿ ರೀ!” ಅಂತ ಸುರು ಮಾಡತಾರ. ನಮ್ಮ ಊರು ನಮ್ಮದು ಹೇಳಲಿಕ್ಕೆ ಯಾಕ ಹಿಂದ ಮುಂದ ನೋಡುದು. 


            ಆಮೇಲೆ ಮತ್ತ ಯಾವಾಗರೆ ಸಿಕ್ಕಾಗ “ಹೆಂಗ ಇದ್ದಿರಿ... ಸೂಟಿಗೆ ಊರಿಗೆ ಹೋಗಿದ್ರಿ?” ಅಂತ ಅಗದಿ ಆತ್ಮಿಯತೆ ಇಂದ ಮಾತಾಡಸ್ತಾರ. ನೀವ ಎನ ಅನ್ರಿ ಪರ ಊರಾಗ ನಮ್ಮ ಮಂದಿ ಸಿಕ್ರ ಎಲ್ಲಿ ಇಲ್ಲದ ಅಕ್ಕರೆ ಉಕ್ಕಿ ಬರತದಲಾ.